Thursday, March 26, 2020

ಬೊಕಾಷಿಯೋನ ರಸಿಕತೆಗಳು



ಇಟಲಿಯಲ್ಲಿ ಕೊರೊನಾ ವೈರಸ್ ಕನ್ನಡ ನ್ಯೂಸ್ ಚಾನೆಲ್ ಗಳು ಬೊಬ್ಬಿಡುತ್ತಿರುವಂತೆ `ಮರಣ ಮೃದಂಗ’ ಭಾರಿಸುತ್ತಿದೆ. ಹದಿನಾಲ್ಕನೇ ಶತಮಾನದಲ್ಲಿ ಇದೇ ರೀತಿ ಇಟಲಿಯನ್ನು ಪ್ಲೇಗ್ ಕಾಡಿದಾಗ `ಡೆಕಮೆರಾನ್’ ಎಂಬ ಮಹಾನ್ ಕೃತಿ ರೂಪುಗೊಂಡಿತು. ಅದರ ಕೆಲವು `ರಸಿಕತೆ’ಗಳನ್ನು 30 ವರ್ಷಗಳ ಹಿಂದೆಯೇ ನಾನು ಅನುವಾದಿಸಿದ್ದೆ. ಈಗ ಅದರ ಪಿ.ಡಿ.ಎಫ್. ಉಚಿತ ಡೌನ್ ಲೋಡ್ ಗೆ ಲಭ್ಯವಿದೆ. ಅದರ ಹಿನ್ನೆಲೆ ಓದಿ:

ನಾನು 1978-82ರ ಅವಧಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದಾಗ `ಅಂಕುರ’ ಎಂಬ ವಿದ್ಯಾರ್ಥಿ ಮಾಸಪತ್ರಿಕೆಯ ಸಂಪಾದಕನಾಗಿದ್ದೆ. ಪತ್ರಿಕೆ ಮಾರಾಟವೂ ಸಂಪಾದಕ ಮಂಡಳಿಯ ಕೆಲಸವೇ ಆಗಿದ್ದುದರಿಂದ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ (ಅವರ ಮನೆಗಳಿಗೆ), ಇತರ ಸಿಬ್ಬಂದಿಗೆ `ಅಂಕುರ’ ಮಾರಾಟ ಮಾಡುತ್ತಿದ್ದೆವು. ಇದೇ ರೀತಿ ಪತ್ರಿಕೆ ಮಾರಾಟ ಮಾಡಲು ಇಂಗ್ಲಿಷ್ ವಿಭಾಗಕ್ಕೆ ಹೋದಾಗ ನಮ್ಮ ಅಧ್ಯಾಪಕರಾಗಿದ್ದ ಎಚ್.ಎ.ರಾಮಕೃಷ್ಣ (ಅವರು ಕಮೂನ Mistaken Identity ಎಂಬ ನಾಟಕವನ್ನು `ತಪ್ಪಿದ ಎಳೆ’ ಎಂದು ಅನುವಾದಿಸಿದ್ದರು ಹಾಗೂ ಸ್ವತಃ ನಾಟಕ ಸಹ ರಚಿಸಿದ್ದರು) ಹಾಗೂ ಗ್ರಂಥಪಾಲಕರಾದ ರಾಮಚಂದ್ರರವರು ಕೂತು ಮಾತನಾಡುತ್ತಿದ್ದರು. ನನ್ನನ್ನು ಕೂಡಿಸಿಕೊಂಡು ಪತ್ರಿಕೆ, ಲಂಕೇಶ್ ಪತ್ರಿಕೆ, ಇತರ ಪುಸ್ತಕಗಳ ಬಗೆಗೆ ಮಾತನಾಡಿದರು. ಆಗ ಲಂಕೇಶ್ ಪತ್ರಿಕೆಯಲ್ಲಿ ಬರುತ್ತಿದ್ದ `ತುಂಟಾಟ’ದ `ಫೋಲಿ’ ಜೋಕುಗಳ ಬಗ್ಗೆ ಹೇಳುತ್ತಾ, ಈಗ ಲಂಕೇಶ್ ಬರೆಯುವುದೇನು, ಅಂಥವನ್ನು 14ನೇ ಶತಮಾನದಲ್ಲಿಯೇ ಬೊಕಾಷಿಯೋ ಬರೆದಿದ್ದ ಎಂದರು. ಆಗ ನನಗೆ ಬೊಕಾಷಿಯೋನ `ಡೆಕಮೆರಾನ್’ ಪರಿಚಯಿಸಿದರು. ವಿದ್ಯಾರ್ಥಿ ದಿನಗಳಲ್ಲಿ ನಾನು ಮೆಜೆಸ್ಟಿಕ್ ಗೆ ಹೋದಾಗಲೆಲ್ಲಾ ಚಿಕ್ಕಪೇಟೆಯ ಹಳೆಯ ಪುಸ್ತಕದ ಅಂಗಡಿಗಳಿಗೆ ಭೇಟಿ ನೀಡುತ್ತಿದ್ದೆ. ಡೆಕಮೆರಾನ್ ಪರಿಚಯವಾದ ಕೆಲವೇ ವಾರಗಳಲ್ಲಿ ನನಗೆ ಅದರ ಪ್ರತಿಯೊಂದು ದೊರಕಿತು. ಓದಿದ ನಂತರ ನನಗೆ ಅವುಗಳಲ್ಲಿ ಕೆಲವು `ರಸಿಕತೆ’ಗಳನ್ನು ಅನುವಾದ ಮಾಡಬೇಕೆನ್ನಿಸಿ ಅನುವಾದಿಸಿದೆ ಸಹ. ಆದರೆ ಅವುಗಳನ್ನು ಯಾವ ಪತ್ರಿಕೆಯೂ ಪ್ರಕಟಿಸುವುದಿಲ್ಲವೆಂದು ಹಾಗೆಯೇ ನನ್ನ ಬಳಿ 15 ವರ್ಷಗಳು ಹಾಗೆಯೇ ಇದ್ದಿತು. ಗೌರಿ ಲಂಕೇಶರ ಬಳಿ ಮಾತನಾಡುವಾಗ  ವಿಷಯ ತಿಳಿಸಿದಾಗ ಅವರು `ಗೌರಿ ಲಂಕೇಶ್ ಪತ್ರಿಕೆ’ಯಲ್ಲಿ ಹತ್ತನ್ನೆರಡು ವಾರಗಳು ಸರಣಿಯಾಗಿ ಪ್ರಕಟಿಸಿದರು. ನಂತರ 2007ರಲ್ಲಿ ಪುಸ್ತಕ ರೂಪದಲ್ಲಿಯೂ ಪ್ರಕಟವಾಯಿತು. ಈಗ ಅದನ್ನು ಪಿ.ಡಿ.ಎಫ್. ಮಾಡಿ ಎಲ್ಲರಿಗೂ ಉಚಿತವಾಗಿ ಸಿಗಲೆಂದು ಅಂತರ್ಜಾಲದಲ್ಲಿ ಗಾಳಿಗೆ ತೂರಿಬಿಟ್ಟಿದ್ದೇನೆ. ಡೌನ್ ಲೋಡ್ ಮಾಡಿಕೊಂಡು ಓದಿ. ಅದರಲ್ಲಿಯೇ ನನ್ನ ಇಮೇಲ್ ಇದೆ. ಅಭಿಪ್ರಾಯ ತಿಳಿಸಿ.
ಕತೆ ಹೇಳುವ ಮುನ್ನ........
                1348ರಲ್ಲಿ ಇಟಲಿಯ ಸುಂದರ ನಗರಗಳಲ್ಲೊಂದಾದ ಫ್ಲಾರೆನ್ಸ್ ಪ್ಲೇಗ್‍ನ ದಾಳಿಗೆ ಬಲಿಯಾಗಿತ್ತು. ಯಾವ ಗ್ರಹಗತಿಯಿಂದಾಗಿಯೋ ಅಥವಾ ದೇವರ ಕೋಪದಿಂದಾಗಿಯೋ ಏನೋ ಪೂರ್ವದಲ್ಲಿ ಪ್ರಾರಂಭವಾದ ಪ್ಲೇಗ್ ಮಾರಿ ಹುಲುಮಾನವರನ್ನು ಅವರ ಪಾಪಗಳಿಗೆ ಪ್ರತಿಫಲವಾಗಿಯೋ ಏನೋ ಎಂಬಂತೆ ಕಾಡಿತ್ತು. ಸಾವಿರಾರು ಜನ ಹುಳುಗಳ ಹಾಗೆ ಸಾಯುತ್ತಿದ್ದರು. ಊರಿಂದೂರಿಗೆ ವಿನಾಶ ಹರಡುತ್ತಾ ಪಶ್ಚಿಮದ ದಿಕ್ಕಿಗೆ ಸಾಗುತ್ತಿತ್ತು. ಆ ಭಯಂಕರ ಪ್ಲೇಗ್‍ನ ಎದುರು ಮನುಷ್ಯನ ಯಾವುದೇ ಜಾಣತನ, ಮುಂದಾಲೋಚನೆ ಕೆಲಸಕ್ಕೆ ಬರುತ್ತಿರಲಿಲ್ಲ. ವರುಷದ ವಸಂತದ ಆಗಮನದೊಂದಿಗೆ ಪ್ಲೇಗ್‍ನ ಭಯಂಕರ ಪರಿಣಾಮಗಳು ಕಾಣಿಸಿಕೊಳ್ಳತೊಡಗಿದವು. ಪೂರ್ವದಲ್ಲಿ ಮೂಗಿನಿಂದ ರಕ್ತ ಸುರಿಯುವುದು ಸಾವಿನ ನಿಶ್ಚಿತ ಸಂಕೇತವಾಗಿತ್ತು. ಆದರೆ ಇಲ್ಲಿ ಅದರ ಜೊತೆಗೆ ಕಂಕುಳು ಹಾಗೂ ತೊಡೆಗಳ ಸಂದಿಯಲ್ಲಿ ಗಂಟುಗಳು ಕಾಣಿಸಿಕೊಳ್ಳಲಾರಂಭಿಸಿದವು. ನಂತರ ಆ ತರಹದ ಗಂಟುಗಳು ದೇಹವೆಲ್ಲಾ ವ್ಯಾಪಿಸುತ್ತಿದ್ದುವು. ಮೈಮೇಲೆಲ್ಲಾ ಕಪ್ಪು ಅಥವಾ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತಿದ್ದವು. ಆ ಚುಕ್ಕೆಗಳು ಸಾವಿನ ಆಗಮನವನ್ನು ಸಾರುತ್ತಿದ್ದವು.
                ಆ ಭಯಂಕರ ವ್ಯಾಧಿಗೆ ಕಾರಣವೇನೆಂದು ತಿಳಿಯದೆ ವೈದ್ಯರು ಕಂಗಾಲಾಗಿದ್ದರು. ಆವರ ಯಾವುದೇ ಸಲಹೆ, ಔಷಧ ಕೆಲಸ ಮಾಡುತ್ತಿರಲಿಲ್ಲ. ಪ್ಲೇಗ್ ರೋಗ ಒಬ್ಬರಿಂದೊಬ್ಬರಿಗೆ ಕಾಡ್ಗಿಚ್ಚಿನಂತೆ ಹರಡುತ್ತಿತ್ತು. ರೋಗಿಯೊಬ್ಬನ ಬಳಿ ಹೋದರೆ, ಮಾತನಾಡಿದರೆ ಆತನ ಬಟ್ಟೆ, ಇನ್ನಾವುದೇ ವಸ್ತು ಮುಟ್ಟಿದರೂ ಸಹ ರೋಗ ಹರಡುವುದು ಖಚಿತವಾಗಿತ್ತು. ಇದರಿಂದಾಗಿ ಜನರಲ್ಲಿ ಎಷ್ಟು ಹೆದರಿಕೆ ಉಂಟಾಗಿತ್ತೆಂದರೆ, ಕೊನೆಕೊನೆಗೆ ರೋಗಿಗಳನ್ನು ಅವರ ಪಾಡಿಗೆ ಬಿಟ್ಟು ತಮ್ಮ ರಕ್ಷಣೆಗಾಗಿ ಅವರಿಂದ ದೂರ ಓಡುತ್ತಿದ್ದರು.
                ಕೆಲಜನ ಈ ರೋಗಿಗಳ ಸಹವಾಸವೇ ಬೇಡವೆಂದು ತಮ್ಮದೇ ಒಂದು ಗುಂಪು ರಚಿಸಿಕೊಂಡು ಯಾವುದಾದರೂ ಮನೆಯಲ್ಲಿ ತಮ್ಮ ಆಳುಕಾಳುಗಳೊಂದಿಗೆ, ರುಚಿಶುಚಿಯಾದ ಆಹಾರ ಸೇವಿಸಿಕೊಂಡು, ಒಳ್ಳೆಯ ವೈನ್ ಚಪ್ಪರಿಸಿಕೊಂಡು, ಹೊರಗಿನ ಸಾವು ನೋವಿನ ಪ್ರಪಂಚಕ್ಕೆ ತಮ್ಮ ಮನೆಯ ಹಾಗೂ ಮನದ ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಂಡು ಸಾವು ನರಳಾಟದ ವಿಷಯಗಳನ್ನೇ ಮಾತನಾಡದಂತೆ ಸಂಗೀತ ಪ್ರಪಂಚದಲ್ಲಿ ಮುಳುಗಿರುತ್ತಿದ್ದರು. ಇನ್ನು ಕೆಲವರು ಇದಕ್ಕೆ ತದ್ವಿರುದ್ಧವಾಗಿ ಚೆನ್ನಾಗಿ ಕುಡಿದು, ಊರೆಲ್ಲಾ ಅಲೆದಾಡುತ್ತ, ಸಿಕ್ಕ ಸಿಕ್ಕ ಮನೆಗಳಿಗೆ ನುಗ್ಗಿ (ಬಹುಪಾಲು ಮನೆಗಳು ಖಾಲಿಯಾಗಿದ್ದವು) ದಾಂಧಲೆ ಎಬ್ಬಿಸುತ್ತಾ, ರೋಗಿಗಳನ್ನು ಸೋಕಿಸಿಕೊಳ್ಳದೆ ಈ ರೀತಿ ಮೋಜು ಮಾಡುವುದೇ ಪ್ಲೇಗ್ ರೋಗಕ್ಕೆ ಸರಿಯದ ಔಷಧವೆಂದು ನಂಬಿದ್ದರು.
                ಇಂಥ ಭೀಭತ್ಸ ವಾತಾವರಣದಲ್ಲಿ ನಗರದ ಕಾನೂನು ಪಾಲಕರು ನಿಯಮ, ಕಾನೂನುಗಳೆಲ್ಲಾ ಸಾವಿನ ಗಾಳಿಗೆ ತೂರಿಹೋಗಿದ್ದವು. ಎಲ್ಲರೂ ಅವರಿಗಿಷ್ಟ ಬಂದಹಾಗೆ ನಡೆದು ಕೊಳ್ಳುತ್ತಿದ್ದರು.
                ಬಹುಪಾಲು ಜನ ತಮ್ಮ ಮನೆ, ಆಸ್ತಿಪಾಸ್ತಿ ತ್ಯಜಿಸಿ, ಅಷ್ಟೇಕೆ ರೋಗದಿಂದ ನರಳುತ್ತಿರುವ ತಮ್ಮ ಸಂಬಂಧಿಕರನ್ನು, ಅಮ್ಮ ಅಪ್ಪಂದಿರನ್ನು, ಅಣ್ಣ ತಂಗಿಯರನ್ನು, ಹೆಂಡತಿ ಗಂಡಂದಿರನ್ನೂ ಬಿಟ್ಟು ಸಾವಿನಿಂದ ದೂರ ಓಡುವ ಸಲುವಾಗಿ ಫ್ಲಾರೆನ್ಸ್ ನಗರ ಬಿಟ್ಟು ಪರ ಊರುಗಳಿಗೆ ಹೋಗುತ್ತಿದ್ದರು. ಕೆಲವರಿಗೆ ಆತ್ಮೀಯ ಗೆಳೆಯರೋ ಅಥವಾ ಹಣದಾಸೆಗೆ ಇರುತ್ತಿದ್ದ ಸೇವಕರೋ ತಮ್ಮ ಸೇವೆಗೆ ಇರುವುದನ್ನು ಬಿಟ್ಟಲ್ಲಿ, ಬಹುಪಾಲು ರೋಗಿಗಳು ತಮ್ಮ ಆರೈಕೆಗೆ ಯಾರೂ ಇಲ್ಲದೆ ಸಾಯುತ್ತಿದ್ದರು.
                ಸಾವಿನ ಸಂಖ್ಯೆ ಹೆಚ್ಚಿದಂತೆಲ್ಲಾ ಶವಸಂಸ್ಕಾರದ ಆಚರಣೆಗಳೂ ಬದಲಾಗುತ್ತಿದ್ದವು. ಮೊದಲಿನಂತೆ ಶಿಸ್ತಿನ ಆಚರಣೆಗಳನ್ನು ನಡೆಸದೆ ಕಾಟಾಚಾರಕ್ಕೆ ಬೇಗ ಬೇಗ ಒಂದೆರಡು ಶಾಸ್ತ್ರಗಳನ್ನು ನಡೆಸಿ ಸಿಕ್ಕಸಿಕ್ಕ ಸ್ಮಶಾನಗಳಲ್ಲಿ ಹೂತುಬಿಡುತ್ತಿದ್ದರು. ಪಾದ್ರಿ, ಪುರೋಹಿತರಿಗಂತೂ ಬಿಡುವೇ ಇರುತ್ತಿರಲಿಲ್ಲ. ಸತ್ತವರಿಗೆ ಅಳುವವರೇ ಇರುತ್ತಿರಲಿಲ್ಲ. ಹೆಣಗಳನ್ನು ಗಾಡಿಗಳಲ್ಲಿ ಸ್ಮಶಾನಕ್ಕೆ ಸಾಗಿಸುತ್ತಿದ್ದರು. ದೊಡ್ಡ ದೊಡ್ಡ ಹಳ್ಳಗಳನ್ನು ಅಗೆದು ಹಡಗಿಗೆ ಸಾಮಾನು ತುಂಬಿಸುವಂತೆ ಶವಗಳನ್ನು ಗುಂಡಿಗೆ ತುಂಬಿ ಸಾಮೂಹಿಕ ಶವಸಂಸ್ಕಾರ ನಡೆಸಿಬಿಡುತ್ತಿದ್ದರು.
                ಮಾರ್ಚ್ ಹಾಗೂ ಜುಲೈನ ನಡುವೆ ಫ್ಲಾರೆನ್ಸ್ ನಗರವೊಂದರಲ್ಲೇ ಒಂದು ಲಕ್ಷ ಜನ ಸತ್ತಿದ್ದರು.  ಪ್ಲೇಗ್ ದಾಳಿಯಿಡುವ ಮೊದಲು ಆ ನಗರದಲ್ಲಿ ಅಷ್ಟೊಂದು ಜನರಿದ್ದಾರೆಂದು ತಿಳಿದೇ ಇರಲಿಲ್ಲ!
                ಹೋ! ಫ್ಲಾರೆನ್ಸ್ ಎಂಥ ಸುಂದರ ನಗರ! ಅದ್ಭುತ ಅರಮನೆಗಳೂ, ಸುಂದರ ಮನೆಗಳೂ- ಕೆಲದಿನಗಳ ಹಿಂದಷ್ಟೇ ರಾಜಮನೆತನದವರಿಂದ, ಶ್ರೀಮಂತ, ಕುಲೀನ ಮನೆತನದವರಿಂದ ಅವರ ಆಳುಕಾಳುಗಳಿಂದ ಗಿಜಿಗಿಜಿಗುಡುತ್ತಿದ್ದ ಆ ಮನೆಗಳು ಇಂದು ಮಸಣಗಳಾಗಿವೆ. ಬೆಳಗಿದ್ದ ಜನ ರಾತ್ರಿ ಇರುತ್ತಿರಲಿಲ್ಲ. ಇಹಲೋಕದಲ್ಲಿ ಮಧ್ಯಾಹ್ನ ಗೆಳೆಯರೊಂದಿಗೆ, ನೆಂಟರೊಂದಿಗೆ ಊಟ ಮಾಡಿದವರು ರಾತ್ರಿಯ ಊಟದ ಹೊತ್ತಿಗೆ ತಮ್ಮ ಪಿತೃಗಳೊಂದಿಗೆ ಪರಲೋಕದಲ್ಲಿರುತ್ತಿದ್ದರು!
                ಅಂತಹ ದಟ್ಟ ಸಾವಿನ ವಾಸನೆಯ ವಾತಾವರಣದಲ್ಲಿ ಒಂದು ಮಂಗಳವಾರ ಮುಂಜಾನೆ ಏಳು ಜನ ಯುವತಿಯರು ಸಂತ ಮರಿಯಾ ನೊವೆಲ್ಲಾ ಚರ್ಚಿನ ಬಳಿ ಪ್ರಾರ್ಥನೆಗೆಂದು ಬಂದವರು ಆಕಸ್ಮಿಕವಾಗಿ ಭೇಟಿಯಾಗುತ್ತಾರೆ. ಆ ಯುವತಿಯರು ಹದಿನೆಂಟರಿಂದ ಇಪ್ಪತ್ತೆಂಟರ ವಯಸ್ಸಿನವರು. ವಿದ್ಯಾವಂತರೂ, ಸುಸಂಸ್ಕøತರೂ, ಸುಂದರಿಯರೂ ಆಗಿದ್ದು ಉತ್ತಮ ಮನೆತನದಿಂದ ಬಂದವರಾಗಿರುತ್ತಾರೆ. ಅವರ ಹೆಸರುಗಳು ಪಾಂಪಿನಿಯಾ, ಫಿಯಮೆಟ್ಟಾ, ಫಿಲೋಮೆನ, ಎಮಿಲಿಯ, ಲಾರೆಟ್ಟ, ನೆಫಿಲೆ ಮತ್ತು ಎಲಿಸಾ. ಅವರೆಲ್ಲಾ ಪ್ಲೇಗ್‍ನಿಂದಾದ ಸಾವು ನೋವಿನ ವಿಷಯ ಮಾತನಾಡುತ್ತಾ ಇರುವಾಗ ಹಿರಿಯವಳಾದ ಪಾಂಪಿನಿಯ ಹೇಳುತ್ತಾಳೆ, ‘ಈ ನಗರದಲ್ಲಿ ನಾವೆಲ್ಲಾ ಏನೂ ಕಾರಣವಿಲ್ಲದೆ ಇದ್ದೇವೆ. ದಿನನಿತ್ಯ ಸಾವು-ನೋವು, ನರಳಾಟ ಕಾಣುತ್ತಿದ್ದೇವೆ, ಪಾದ್ರಿಯ ಒಂದೇ ಪ್ರಾರ್ಥನೆಯ ಯಾಂತ್ರಿಕ ವದರಾಟ ಕೇಳುತ್ತಿದ್ದೇವೆ. ಅವರಿವರಿಂದ ನಮಗೆ ಸಿಗುವ ಸುದ್ದಿಯೂ ಸಾವಿನ ಸುದ್ದಿಯೇ ಆಗಿರುತ್ತದೆ. ಎಲ್ಲಿ ಹೋದರೂ, ಎಲ್ಲಿ ನೋಡಿದರೂ ಸತ್ತವರ ಪ್ರೇತಾತ್ಮಗಳೇ ಕಂಡಂತೆ ಭಾಸವಾಗುತ್ತದೆ. ಹಾಗಿರುವಾಗ ಈ ಸ್ಮಶಾನ ನಗರದಲ್ಲಿ ನಾವೇಕೆ ಇರಬೇಕು. ನಮ್ಮ ಆತ್ಮಗಳೂ ಸಹ ನಮ್ಮ ದೇಹಕ್ಕೆ ಬೇರೆಯವರಿಗಿಂತ ಬಲವಾಗೇನೂ ಅಂಟಿಕೊಂಡಿಲ್ಲ. ನಮ್ಮಂಥ ಯುವಕ ಯುವತಿಯರೂ ಸತ್ತಿರುವುದನ್ನು ಕಂಡಿದ್ದೇವೆ. ಹಾಗಿರುವಾಗ ನಮಗೆ ಶಕ್ತಿ ಇರುವಾಗಲೇ ಈ ಊರು ಬಿಟ್ಟು ದೂರ ಹೋಗೋಣ; ಸಾಧ್ಯವಿರುವಾಗಲೇ ತಪ್ಪಿಸಿಕೊಳ್ಳೋಣ. ಪಕ್ಷಿಗಳ ಕಲರವ ಕೇಳುವಲ್ಲಿಗೆ, ಸುಂದರ ಹಸಿರು ಬೆಟ್ಟ, ಕಣಿವೆ ಕಾಣುವಲ್ಲಿಗೆ, ಸಮುದ್ರದ ಅಲೆಗಳ ಹಾಗೆ ಓಲಾಡುವ ಗೋಧಿ ಹೊಲಗಳು ಇರುವೆಡೆಗೆ ಹೋಗೋಣ. ನಾವು ಎಲ್ಲರನ್ನೂ ಬಿಟ್ಟು ಹೋಗುತ್ತಿದ್ದೇವೆನ್ನುವ ಪಾಪ ಪ್ರಜ್ಞೆ ಬೇಡ. ಏಕೆಂದರೆ ನಾವು ಯಾರನ್ನೂ ಬಿಟ್ಟು ಹೋಗುತ್ತಿಲ್ಲ; ಒಂದು ರೀತಿಯಲ್ಲಿ ನಮ್ಮ ಸಂಬಂಧಿಕರೆಲ್ಲಾ ಸತ್ತು ನಮ್ಮನ್ನೇ ಬಿಟ್ಟು ಹೋಗಿದ್ದಾರೆ. ನಾವು ಇಲ್ಲೇ ಇದ್ದರಂತೂ ನಮಗೆ ಸಾವು ನಿಶ್ಚಿತ. ಆದ್ದರಿಂದ ದೂರದ ಹಳ್ಳಿಗಳಿಗೆ ನಮ್ಮ ಆಳುಕಾಳುಗಳೊಂದಿಗೆ ಹೋಗೋಣ. ಸಾಧ್ಯವಿರುವಷ್ಟು ದಿನ ಸುಖ ಸಂತೋಷದಿಂದ ಬದುಕೋಣ.
                ಪಾಂಪಿನಿಯಾಳ ಸಲಹೆಯನ್ನು ಎಲ್ಲರೂ ಒಪ್ಪುತ್ತಾರೆ ಹಾಗೂ ಕೂಡಲೇ ಹೊರಡೋಣವೆಂದು ಹೇಳುತ್ತಾರೆ. ಆಗ, ‘ಬರೇ ಹೆಂಗಸರೇ ಹೊರಡುವುದು ಕಷ್ಟ.. ನಿಮಗೇ ಗೊತ್ತು ಗಂಡಸೊಬ್ಬನಿಲ್ಲದಿದ್ದಲ್ಲಿ ಹೆಂಗಸರು ಹೇಗೆ ವರ್ತಿಸುತ್ತಾರೆಂಬುದು! ನಾವೆಲ್ಲಾ ಮೊದಲೇ ಪುಕ್ಕಲು ಸ್ವಭಾವದವರು. ಯಾರಾದರು ಗಂಡಸರನ್ನೂ ಕರೆದೊಯ್ಯೋಣಎನ್ನುತ್ತಾಳೆ ಫಿಲೋಮೆನಾ. ಆಗ ಅಲ್ಲಿಗೆ ಪಾಂಫಿಲೊ, ಫಿಲೋಸ್ಟ್ರಾಟೊ ಹಾಗೂ ಡಿಯೋನಿಯೋ ಎಂಬ ಮೂವರು ಸ್ಫುರದ್ರೂಪಿ ಯುವಕರು ಬರುತ್ತಾರೆ. ಅವರು ಆ ಯುವತಿಯರಿಗೆ ಪರಿಚಯವಿದ್ದವರೆ. ಪಾಂಪಿನಿಯಾ, ‘ಅದೃಷ್ಟವೇ ಅವರನ್ನು ಅಲ್ಲಿಗೆ ಕರೆತಂದಿದೆಎಂದು ಹೇಳುತ್ತಾ, ಅವರಿಗೆ ಅದುವರೆಗೆ ನಡೆದ ಮಾತುಕತೆಯೆಲ್ಲಾ ತಿಳಿಸಿ ಅವರ ಜೊತೆ ಬರುವಂತೆ ಕೇಳುತ್ತಾಳೆ. ಆ ಯುವಕರೂ ಸಂತೋಷದಿಂದ ಹೊರಡಲು ತಯಾರಾಗುತ್ತಾರೆ.
                ಎಲ್ಲರೂ ಮರುದಿನ ಮುಂಜಾನೆಯೇ ತಮಗೆ ಬೇಕಾದ ಸಾಮಾನು ಸರಂಜಾಮುಗಳನ್ನು ಹೊತ್ತು ಆಳುಕಾಳುಗಳೊಂದಿಗೆ ಹೊರಟು ಊರ ಹೊರಗಿನ ತೋಟದ ಮನೆಯೊಂದಕ್ಕೆ ಹೋಗುತ್ತಾರೆ. ಆ ಹತ್ತು ಜನಗಳ ಗುಂಪಿನಲ್ಲಿ ದಿನಕ್ಕೊಬ್ಬರು ನಾಯಕರಾಗಬೇಕೆಂದೂ, ಆ ದಿನ ಎಲ್ಲರೂ ಅವರು ಹೇಳಿದಂತೆ ಕೇಳಬೇಕೆಂದು ತೀರ್ಮಾನಿಸುತ್ತಾರೆ.
                ಆ ಮನೆಯಲ್ಲಿ ಎಲ್ಲರೂ ಹರುಷೋಲ್ಲಾಸದಿಂದ ರುಚಿಯಾದ ವೈನ್ ಕುಡಿದು, ಒಳ್ಳೆಯ ಆಹಾರ ಸೇವಿಸಿ, ಹೊರಗಿನ ತೋಟದಲ್ಲಿ ಓಡಾಡಿ, ಹಾಡು, ಸಂಗೀತದೊಂದಿಗೆ ಹೊರಗಿನ ಸಾವಿನ ಪ್ರಪಂಚ ಮರೆತು ಕಾಲ ಕಳೆಯುತ್ತಾರೆ.
                ಮೊದಲನೆಯ ದಿನ ಆ ಗುಂಪಿಗೆ ನಾಯಕಿಯದ ಪಾಂಪಿನಿಯಾ ಕಾಲ ಕಳೆಯಲು ದಿನಕ್ಕೊಬ್ಬಬ್ಬರು ಒಂದೊಂದು ಕತೆ ಹೇಳಬೇಕೆಂದು ತಿಳಿಸುತ್ತಾರೆ. ಎಲ್ಲರೂ ಆ ಸಲಹೆಯನ್ನು ಅನುಮೋದಿಸಿ ಕತೆಗಳನ್ನು ಕೇಳಲು ಉತ್ಸುಕರಾಗುತ್ತಾರೆ.

https://archive.org/details/boccaccionarasikategalu

No comments: